ಎಷ್ಟೇ ನೆನೆದರೂ ಮಾಸದ ನೆನಪು ಪುನೀತ್ ರಾಜ್ಕುಮಾರ್ (Puneeth Rajkumar) ಅವರದ್ದು. ಅಗಲಿ ವರ್ಷಕ್ಕೂ ಹೆಚ್ಚು ಕಾಲವಾಗಿದ್ದರೂ ಪುನೀತ್ ಒಂದಲ್ಲ ಒಂದುಕಡೆ, ಒಂದಲ್ಲ ಒಂದು ಕಾರಣಕ್ಕೆ ಸ್ಮರಿಸುತ್ತಲೇ ಇರುತ್ತಾರೆ ಅಭಿಮಾನಿಗಳು. ಪುನೀತ್ ಮಾಡಿದ ಎಷ್ಟೋ ಕಾರ್ಯಗಳು ಅವರು ಅಗಲಿದ ಬಳಿಕ ಬೆಳಕಿಗೆ ಬರುತ್ತಿವೆ. ತಮಿಳಿನ ಜನಪ್ರಿಯ ನಟ, ನಿರ್ದೇಶಕ ಸಮುದ್ರಖನಿ (Samuthirakani) ಸಂದರ್ಶನವೊಂದರಲ್ಲಿ ಪುನೀತ್ ರಾಜ್ಕುಮಾರ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ. ಸಂಕಷ್ಟವೊಂದರಿಂದ ಹೇಗೆ ಪುನೀತ್ ತಮ್ಮನ್ನು ಪಾರು ಮಾಡಿದ್ದರು ಎಂದು ಹೇಳಿಕೊಂಡಿದ್ದಾರೆ.
ಸಮುದ್ರಖನಿ, 2019 ರಲ್ಲಿ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಪುನೀತ್ ರಾಜ್ಕುಮಾರ್ ಬಗ್ಗೆ ಮಾತನಾಡಿದ್ದು, ‘ನಾನು, ಪುನೀತ್ ರಾಜ್ಕುಮಾರ್ ಗಾಗಿ ಯಾರೆ ಕೂಗಾಡಲಿ ಸಿನಿಮಾ ನಿರ್ದೇಶನ ಮಾಡುತ್ತಿದ್ದೆ. ಮೈಸೂರಿನ ಬಳಿ ಶೂಟಿಂಗ್ ನಡೆಯುತ್ತಿತ್ತು. ಅದೇ ಸಮಯದಲ್ಲಿ ಕಾವೇರಿ ಕುರಿತ ವಿವಾದವೊಂದು ಭುಗಿಲೆದ್ದಿತು. ಆಗ ತಮಿಳಿನ ನಿರ್ದೇಶಕನೊಬ್ಬ ಮೈಸೂರಿನಲ್ಲಿ ಶೂಟಿಂಗ್ ಮಾಡುತ್ತಿದ್ದಾನೆ ಎಂದು ಗೊತ್ತಾಗಿ ಸುಮಾರು ನೂರು ಜನ ಬೈಕ್ಗಳಲ್ಲಿ ಶೂಟಿಂಗ್ ಸೆಟ್ಗೆ ಬಂದುಬಿಟ್ಟಿದ್ದರು” ಎಂದು ಸಮುದ್ರಖನಿ ನೆನಪು ಮಾಡಿಕೊಂಡಿದ್ದಾರೆ.
”ನಾನು ಹಾಗೂ ನಮ್ಮ ಕ್ಯಾಮೆರಾಮನ್ ಕೆಲವು ಆರ್ಟ್ ಡೈರೆಕ್ಟರ್ಗಳು ತಮಿಳುನಾಡಿನವರು. ಇಬ್ಬರೂ ಗಾಬರಿಯಾಗಿಬಿಟ್ಟಿದ್ದೆವು. ಆದರೆ ಪುನೀತ್ ನಮ್ಮ ಬೆಂಬಲಕ್ಕೆ ಬಂದರು, ನನ್ನ ತೋಳ ಮೇಲೆ ಕೈ ಹಾಕಿ, ನನ್ನ ಸಹೋದರ ಇವರು ಎಲ್ಲರೂ ವಾಪಸ್ ಹೊರಡಿ ಎಂದರು ಅಷ್ಟೆ. ಬಂದವರೆಲ್ಲರೂ ಏನೂ ಮಾತನಾಡದೆ ವಾಪಸ್ ಹೋದರು. ಅದು ಪುನೀತ್ ರಾಜ್ಕುಮಾರ್ ಪವರ್” ಎಂದಿದ್ದಾರೆ ಸಮುದ್ರಖನಿ.
”ಅವರು ಬಹಳ ಸಿಂಪಲ್, ನಾವು ಏನು ಕೊಡುತ್ತೇವೆಯೋ ಅದೇ ನಮಗೆ ವಾಪಸ್ ಬರುತ್ತದೆ. ಅವರು ಸಮಾಜಕ್ಕೆ ಸಾಕಷ್ಟು ಕೊಟ್ಟಿದ್ದಾರೆ, ಅದೇ ಗೌರವವನ್ನು ಸಮಾಜ ಅವರಿಗೆ ಕೊಡುತ್ತಿದೆ. ಯಾವುದೇ ರಾಜ್ಯದಲ್ಲಾದರೂ ಅಷ್ಟೆ ಮೊದಲಿಗೆ ಕಲೆಗೆ ಗಡಿಗಳೇ ಇಲ್ಲ” ಎಂದು ಸಮುದ್ರಖನಿ ಸಂದರ್ಶನದಲ್ಲಿ ಹೇಳಿದ್ದಾರೆ.
ಸಮುದ್ರಖನಿ, ತಮಿಳಿನಲ್ಲಿ ನಿರ್ದೇಶಿಸಿದ್ದ ಪೊರಾಲಿ ಸಿನಿಮಾವನ್ನು ಅವರೇ ಕನ್ನಡದಲ್ಲಿ ಯಾರೆ ಕೂಗಾಡಲಿ ಹೆಸರಿನಲ್ಲಿ ರೀಮೇಕ್ ಮಾಡಿದರು. ಆ ಮೊದಲು ಸಮುದ್ರಖನಿಯವರೇ ನಿರ್ದೇಶಿಸಿದ್ದ ನಾಡೋಡಿಗಳ್ ಸಿನಿಮಾವನ್ನು ಹುಡುಗರು ಹೆಸರಲ್ಲಿ ಪುನೀತ್ ರಾಜ್ಕುಮಾರ್ ರೀಮೇಕ್ ಮಾಡಿದ್ದರು. ಆ ಸಿನಿಮಾವನ್ನೇ ಸಮುದ್ರಖನಿ ನಿರ್ದೇಶಿಸಬೇಕಿತ್ತು ಆದರೆ ಅದು ಸಾಧ್ಯವಾಗಿರಲಿಲ್ಲ.
ಪ್ರಶಸ್ತಿ ವಿತರಣಾ ಸಮಾರಂಭವೊಂದರಲ್ಲಿ ಪುನೀತ್ ರಾಜ್ಕುಮಾರ್ ಸಮುದ್ರಖನಿಯನ್ನು ಕೊಂಡಾಡಿದ್ದರು. ಅವರು ನನ್ನ ಸಹೋದರ ಎಂದು ಅಂದೇ ವೇದಿಕೆ ಮೇಲೆ ಹೇಳಿದ್ದ ಪುನೀತ್, ಸಮುದ್ರಖನಿಯೊಟ್ಟಿಗೆ ಕೆಲಸ ಮಾಡಲು ಕಾಯುತ್ತಿದ್ದೇನೆ ಎಂದಿದ್ದರು. ಅಂತೆಯೇ ಇಬ್ಬರೂ ಯಾರೆ ಕೂಗಾಡಲಿ ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದರು. ಸಿನಿಮಾವು 2012 ರಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆಯಿತು. ಸಿನಿಮಾದಲ್ಲಿ ಪುನೀತ್ ಜೊತೆಗೆ, ಲೂಸ್ ಮಾದ ಯೋಗಿ ನಟಿಸಿದ್ದರು, ಭಾವನಾ ಹಾಗೂ ಸಿಂಧು ಲೋಕನಾಥ್, ನಿವೇದಿತಾ ನಾಯಕಿಯರು. ಗಿರೀಶ್ ಕಾರ್ನಾಡ್, ಪಿ ರವಿಶಂಕರ್, ಸಾಧುಕೋಕಿಲ, ಶೋಭರಾಜ್, ಮಾಳವಿಕ ಅವಿನಾಶ, ಅಚ್ಯುತ್ ಕುಮಾರ್ ಅವರುಗಳಿದ್ದ ಬಹುತಾರಾಗಣದ ಸಿನಿಮಾ ಅದಾಗಿತ್ತು.