‘ಟೋಬಿ’ ನಿಧಾನವಾಗಿ ಅಬ್ಬರಿಸುವುದಕ್ಕೆ ಶುರು ಮಾಡಿದೆ. ಇಷ್ಟು ದಿನ ಸೈಲೆಂಟ್ ಆಗಿದ್ದು, ಇನ್ನೇನು ರಿಲೀಸ್ ಡೇಟ್ ಸಮೀಸುತ್ತಿದೆ ಅನ್ನುವಾಗಲೇ ಫುಲ್ ಆಕ್ಟಿವ್ ಆಗಿಬಿಟ್ಟಿದೆ. ಅಂದ್ಹಾಗೆ, ‘ಟೋಬಿ’ ಹಿಂದಿನ ಕುತೂಹಲ ರಾಜ್ ಬಿ ಶೆಟ್ಟಿ.
ಈ ಸಿನಿಮಾ ಹಾಡಿನ ಸಾಲೊಂದು ತುಂಬಾನೇ ಫೇಮಸ್ ಆಗುತ್ತಿದೆ. ಅದುವೇ ಮಾರಿ ಮಾರಿ.. ಮಾರಿಗೆ ದಾರಿ. ಇಷ್ಟೇ ಅಲ್ಲ ಸಿನಿಮಾದ ಟೈಟಲ್ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಕೆಣಕಿದರೆ ಕುರಿಯೂ ಮಾರಿಯಾಗಬಲ್ಲದು ಅನ್ನೋದೇ ಸಿನಿಮಾ ಥೀಮ್. ಹೀಗಾಗಿ ಇಲ್ಲಿ ಟಗರು, ಮೇಕೆ, ಕುರಿ ಯಾವುದೇ ಇದ್ದರೂ ಅದಿಲ್ಲಿ ರೂಪಕವಾಗಿದೆ.
ಅಷ್ಟಕ್ಕೂ ಟಗರು, ಮೇಕೆ, ಕುರಿ ಬಗ್ಗೆ ಚರ್ಚೆಯಾಗುತ್ತಿರೋದಕ್ಕೂ ಒಂದು ಕಾರಣವಿದೆ. ‘ಟೋಬಿ’ ಫಸ್ಟ್ ಲುಕ್ ಹಾಗೂ ರಿಲೀಸ್ ಡೇಟ್ ಅನೌನ್ಸ್ ಆಗುವ ವೇಳೆ ಚರ್ಚೆ ಬಂದ ವಿಷಯವಿದು. ಕನ್ನಡದ ಸಿನಿಮಾಗಳ ಟೈಟಲ್ನಲ್ಲೋ, ಸಿನಿಮಾದ ಒಳಗೋ ಟಗರು, ಕುರಿ, ಮೇಕೆ ಬಂದು ಹೋದರೆ ಆ ಸಿನಿಮಾ ಸೂಪರ್ ಹಿಟ್ ಆಗುತ್ತೆ. ಅದಕ್ಕೆ ಒಂದು ಸಿನಿಮಾಗಳನ್ನು ಉದಾಹರಣೆಯಾಗಿಯೂ ನೀಡಲಾಗಿತ್ತು. ಆ ಸಿನಿಮಾಗಳು ಯಾವುವು? ಅನ್ನೋದನ್ನು ನೋಡೋಣ.
ಶಿವಣ್ಣ, ಡಾಲಿಯ ‘ಟಗರು’
ದುನಿಯಾ ಸೂರಿ ನಿರ್ದೇಶಿಸಿದ ಸಿನಿಮಾ ‘ಟಗರು’ ಬಹಳ ಮಂದಿಗೆ ಇಷ್ಟ ಆಗಿತ್ತು. ಶಿವರಾಜ್ಕುಮಾರ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದರು. ಇವರ ಪಾತ್ರವನ್ನು ಟಗರುಗೆ ಹೋಲಿಸಲಾಗಿತ್ತು. “ವಾರೆ ನೋಟ ನೋಡೈತೆ. ಕಾಲು ಕೆರೆದು ನಿಂತೈತೆ. ಗುಟುರು ಹಾಕಿ ಬಂದೈತೆ. ಎದುರು ಹೋದರೆ ಗುಮ್ತೈತೆ” ಅಂತ ಹಾಡಿಲ್ಲಿ ಶಿವಣ್ಣನನ್ನು ಟಗರು ಹೋಲಿಕೆ ಮಾಡಿ ವರ್ಣಿಸಲಾಗಿತ್ತು.
ಈ ಸಿನಿಮಾ ಬಾಕ್ಸಾಫೀಸ್ನಲ್ಲಿ ಸೂಪರ್ ಹಿಟ್ ಆಗಿತ್ತು. ಶಿವಣ್ಣನಿಗೆ ಮತ್ತೊಂದು ಸಕ್ಸಸ್ ಸಿಕ್ಕಿತ್ತು. ಡಾಲಿ ಧನಂಜಯ್ ಹೊಸ ಇಮೇಜ್ ಬಂದಿತ್ತು. 2018ರಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಮೂರನೇ ಸಿನಿಮಾ ಆಗಿತ್ತು.
ಶಿವಣ್ಣನ ‘ಮೈಲಾರಿ’
‘ಟಗರು’ಗೂ ಮುನ್ನ ಶಿವರಾಜ್ಕುಮಾರ್ ನಟಿಸಿದ್ದ ಸಿನಿಮಾ ‘ಮೈಲಾರಿ’. ಈ ಸಿನಿಮಾವನ್ನು ‘ಕಬ್ಜ’ ಸಿನಿಮಾದ ನಿರ್ದೇಶಕ ಆರ್. ಚಂದ್ರು ಆಕ್ಷನ್ ಕಟ್ ಹೇಳಿದ್ರು. ಇದೂ ಕೂಡ ಮಾಸ್ ಆಕ್ಷನ್ ಸಿನಿಮಾ ಆಗಿತ್ತು. ಶಿವರಾಜ್ಕುಮಾರ್ ಮಾಸ್ ಅಂಡ್ ಸ್ಟೈಲಿಶ್ ಲುಕ್ನಲ್ಲಿ ಎಂಟ್ರಿ ಕೊಟ್ಟಿದ್ದರು.
ಶಿವರಾಜ್ಕುಮಾರ್ ಹಾಗೂ ಆರ್.ಚಂದ್ರು ಕಾಂಬಿನೇಷನ್ ಇಲ್ಲಿ ವರ್ಕ್ಔಟ್ ಆಗಿತ್ತು. ಸಿನಿಮಾಗೆ ಬಹುತೇಕ ಪಾಸಿಟಿವ್ ರಿವ್ಯೂ ಸಿಕ್ಕಿತ್ತು. 2010ರಲ್ಲಿ ತೆರೆಕಂಡು ಹಿಟ್ ಆದ ಸಿನಿಮಾಗಳಲ್ಲಿ ‘ಮೈಲಾರಿ’ ಒಂದಾಗಿತ್ತು. ಅಂದ್ಹಾಗೆ, ಈ ಟೈಟಲ್ ಅನ್ನು ಅಣ್ಣಾವ್ರ ಸಿನಿಮಾ ‘ಬಂಗಾರದ ಪಂಜರ’ದಲ್ಲಿ ಮೇಕೆಗೆ ಇಟ್ಟಿದ್ದ ಹೆಸರು.
‘ಸಿಪಾಯಿ’,’ಬಂಗಾರದ ಪಂಜರ’
ಈ ಎರಡು ಸಿನಿಮಾಗಳಷ್ಟೇ ಅಲ್ಲ. ಕನ್ನಡದಲ್ಲಿ ಇನ್ನೂ ಹಲವು ಸಿನಿಮಾಗಳಲ್ಲಿ ಟಗರು, ಮೇಕೆಯನ್ನು ಬಳಸಲಾಗಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ‘ಸಿಪಾಯಿ’ ಸಿನಿಮಾದಲ್ಲೂ ‘ಟಗರು’ ಫೈಟ್ ಇತ್ತು. ಈ ಸೀನ್ನಿಂದಲೇ ಕಥೆಯಲ್ಲಿ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಡಾ.ರಾಜ್ಕುಮಾರ್ ಅಭಿನಯದ ‘ಬಂಗಾರದ ಪಂಜರ’ ಸಿನಿಮಾದಲ್ಲೂ ಮೇಕೆಗಳು ಕಥೆಯ ಪ್ರಮುಖ ಭಾಗವಾಗಿದ್ದವು. ಇದರಲ್ಲಿ ಅಣ್ಣಾವ್ರ ಜೊತೆಗೆ ಇರುತ್ತಿದ್ದ ಮೇಕೆಗೆ ‘ಮೈಲಾರಿ’ ಅಂತ ಹೆಸರಿಟ್ಟಿದ್ದರು.
ಈ ಎಲ್ಲಾ ಸಿನಿಮಾಗಳಲ್ಲಿ ಮೇಕೆ, ಕುರಿ, ಟಗರುಗಳನ್ನು ಬೇರೆ ಬೇರೆ ರೀತಿಯಲ್ಲಿ ಬಳಸಿಕೊಳ್ಳಲಾಗಿತ್ತು. ಈ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಿತ್ತು. ಇದೆಲ್ಲ ಕಾಕತಾಳೀಯವೋ.. ಇಲ್ಲ ಅದೃಷ್ಟವೋ ಸಿನಿಮಾ ಮಂದಿನೇ ಹೇಳಬೇಕು. ಸದ್ಯ ‘ಟೋಬಿ’ ಕೂಡ ಇದೇ ಥೀಮ್ನಲ್ಲಿ ಮೂಡಿ ಬರುತ್ತಿದೆ. ಅದೇನಾಗುತ್ತೋ ನೋಡಬೇಕು.