ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(nirmala sitharaman) ಅವರ ಏಕೈಕ ಪುತ್ರಿ ವಾಙ್ಮಯಿ ಅವರ ವಿವಾಹ(Wedding) ಇಂದು ಬೆಂಗಳೂರಿನಲ್ಲಿ ನೆರವೇರಿತು. ಪ್ರತೀಕ್ ಎಂಬವರ ಜೊತೆ ಉಡುಪಿಯ ಅದಮಾರು ಮಠದ ಬ್ರಾಹ್ಮಣ ಸಂಪ್ರದಾಯ ಪ್ರಕಾರ ವಿವಾಹ ನಡೆಯಿತು. ವಧು ನಸುಕೆಂಪು ಬಣ್ಣದ ಸೀರೆ ಉಟ್ಟಿದ್ದರೆ, ವರ ಬಿಳಿ ಪಂಚೆ, ಶಾಲನ್ನು ಧರಿಸಿದ್ದರು. ಇನ್ನು ಅದ್ಧೂರಿ ಮದುವೆಯಲ್ಲೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೊಳಕಾಲ್ಮೂರು ಸೀರೆಯಲ್ಲಿ ಕಾಣಿಸಿಕೊಂಡಿರುವುದು ವಿಶೇಷ.
ಅದಮಾರು ಮಠದ ವೈದಿಕ ಕ್ರಮವನ್ನು ವಿವಾಹದಲ್ಲಿ ನೆರವೇರಿಸಲಾಯಿತು. ಅದಮಾರು ಮಠದ ವಿಶ್ವಪ್ರಿಯ ತೀರ್ಥ ಶ್ರೀಪಾದರು ಮತ್ತು ಈಶಪ್ರಿಯ ತೀರ್ಥ ಶ್ರೀಪಾದರು ವಧು ವರರನ್ನು ಹರಸಿ ಕಳುಹಿಸಿದ ಮಧುಪರ್ಕ, ಸೀರೆ, ಶಾಲು, ಗಂಧ ಪ್ರಸಾದವನ್ನು ಮಠದ ವ್ಯವಸ್ಥಾಪಕರಾದ ಗೋವಿಂದ ರಾಜರು ಮತ್ತು ಶಿಷ್ಯರು ಮಂತ್ರಘೋಷದ ಮೂಲಕ ನೀಡಿ ಹರಸಿದರು.
ಈಶಪ್ರಿಯ ತೀರ್ಥ ಶ್ರೀಪಾದರು ಅನುಗ್ರಹಿಸಿ ಕಳುಹಿಸಿದ ಉಡುಪಿ ಸೀರೆಯನ್ನು ಪೌರೋಹಿತ್ಯರು ನಿರ್ಮಲ ಸೀತಾರಾಮನ್ ಅವರಿಗೆ ನೀಡಿದರು. ಇನ್ನು ಸಚಿವೆ ನಿರ್ಮಲಾ ಅವರು ಹಿಂದಿನಿಂದಲೂ ಉಡುಪಿ ಮಠದ ಭಕ್ತರು. ಅವರ ಇಚ್ಛೆಯ ಪ್ರಕಾರ ಪುತ್ರಿಯ ವಿವಾಹ ನೆರವೇರಿಸಿದ್ದಾರೆ.