ಹೈದರಾಬಾದ್: ಟಾಲಿವುಡ್ನ ಮೆಗಾ ಕುಟಂಬಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಸೂಪರ್ಸ್ಟಾರ್ ರಾಮ್ಚರಣ್ ಅವರ ಪತ್ನಿ ಉಪಾಸನಾ ಅವರು ಇಂದು (ಜೂ. 20) ಬೆಳಗ್ಗೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮೆಗಾ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.
ರಾಮ್ಚರಣ್ ಮತ್ತು ಉಪಾಸನಾ ಅವರ 11 ವರ್ಷಗಳ ವೈವಾಹಿಕ ಜೀವನದಲ್ಲಿ ಮೊದಲ ಮಗು ಜನಿಸಿದೆ. ಉಪಾಸನಾ ಅವರು ಹೈದರಾಬಾದ್ನ ಜುಬಿಲಿ ಹಿಲ್ಸ್ನಲ್ಲಿರುವ ಅಪೊಲೋ ಆಸ್ಪತ್ರೆಗೆ ಹೆರಿಗೆಗೆಂದು ನಿನ್ನೆ ರಾತ್ರಿಯೇ ದಾಖಲಾಗಿದ್ದರು. ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯು ಹೆಲ್ತ್ ಬುಲೆಟಿನ್ ಮೂಲಕ ತಿಳಿಸಿದೆ.
ಮೆಗಾಸ್ಟಾರ್ ಚಿರಂಜೀವಿ, ಪತ್ನಿ ಸುರೇಖಾ ಸೇರಿದಂತೆ ಇಡೀ ಕಮಿನೇನಿ ವಂಶ ಹೊಸ ಅತಿಥಿಯನ್ನು ತಮ್ಮ ಮನೆಗೆ ಬರಮಾಡಿಕೊಳ್ಳಲು ತುಂಬಾ ಉತ್ಸುಕದಲ್ಲಿದೆ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ರಾಮ್ಚರಣ್-ಉಪಾಸನಾ ದಂಪತಿ ಘೋಷಣೆ ಮಾಡಿದ್ದರು.
ಉಪಾಸನಾ ಅವರು ತಮ್ಮ ಇತ್ತೀಚಿನ ಸಂದರ್ಶನದಲ್ಲಿ ರಾಮ್ ಮತ್ತು ಅವರು ತಮ್ಮ ಹೊಸ ಮಗುವಿನ ಆಗಮನದ ಬಗ್ಗೆ ಸಾಕಷ್ಟು ಉತ್ಸುಕರಾಗಿದ್ದಾರೆ ಎಂದು ಬಹಿರಂಗಪಡಿಸಿದ್ದರು. ಉತ್ತಮ ಪಾಲಕನಾಗಿ ರಾಮ್ಚರಣ್ ಸಕ್ರಿಯ ಪಾತ್ರ ವಹಿಸುತ್ತಾರೆ ಎಂದು ತಿಳಿಸಿದ್ದರು. (ಏಜೆನ್ಸೀಸ್)