ನಿನ್ನೆ ( ಜೂನ್ 7 ) ಬೆಂಗಳೂರಿನ ಅರಮನೆ ಮೈದಾನದಲ್ಲಿ ನಟ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಆರತಕ್ಷತೆ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನೆರವೇರಿತು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳು, ಸಿನಿಮಾ ಕಲಾವಿದರು, ರಾಜಕಾರಣಿಗಳು ಹಾಗೂ ಅಭಿಮಾನಿಗಳು ಬೃಹತ್ ವೈಭವದ ಸ್ಟೇಜ್ ಮೇಲೆ ನಿಂತಿದ್ದ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪಗೆ ಶುಭಕೋರಿದರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರ್ಯಕ್ರಮಕ್ಕೆ ಆಗಮಿಸಿ ನೂತನ ಜೋಡಿಗೆ ಶುಭ ಕೋರಿದರು. ಅಭಿಷೇಕ್ ಅಂಬರೀಶ್ ಹಾಗೂ ಸುಮಲತಾ ಅಂಬರೀಶ್ ಇಬ್ಬರ ಕೆನ್ನೆಯನ್ನೂ ಮುಟ್ಟಿ ದರ್ಶನ್ ಸಂತಸ ವ್ಯಕ್ತಪಡಿಸಿದರು. ಇನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅಭಿಷೇಕ್ ಅಂಬರೀಶ್ ಕೆನ್ನೆಗೆ ಮುತ್ತಿಟ್ಟು ಶುಭ ಕೋರಿದರು.
ಇನ್ನು ಈ ಕಾರ್ಯಕ್ರಮಕ್ಕೆ ರಿಷಬ್ ಶೆಟ್ಟಿ ದಂಪತಿ, ಎಸ್ ಎಂ ಕೃಷ್ಣ, ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಜಮೀರ್ ಅಹ್ಮದ್ ಖಾನ್, ಹಿರಿಯ ನಟರಾದ ಉಮೇಶ್ ಆಗಮಿಸಿದ್ದರು. ಅಲ್ಲದೇ ನಟ ಹಾಗೂ ರಾಜಕಾರಣಿ ಶತ್ರುಜ್ಞ ಸಿನ್ಹ ಮತ್ತು ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಸಹ ಈ ಕಾರ್ಯಕ್ರಮಕ್ಕೆ ಆಗಮಿಸಿ ವಧು ವರರಿಗೆ ಶುಭ ಕೋರಿ, ಹರಸಿದರು.
ಹೀಗೆ ತನ್ನ ಆರತಕ್ಷತೆ ಕಾರ್ಯಕ್ರಮ ಅದ್ದೂರಿಯಾಗಿ ಮುಕ್ತಾಯಗೊಂಡ ನಂತರ ಮಾಧ್ಯಮದವರ ಜತೆ ಮಾತನಾಡಿದ ಅಭಿಷೇಕ್ ಅಂಬರೀಶ್ ತಂದೆಯಂತೆ ಮಾಧ್ಯಮದವರ ಜತೆ ತಮಾಷೆಯಾಗಿ ಮಾತನಾಡುತ್ತಾ ತಮ್ಮ ಮಾತನ್ನು ಆರಂಭಿಸಿದರು.
ಮೊದಲಿಗೆ ಮಾಧ್ಯಮದವರು ಮದುವೆಯಾಗಿದ್ದರ ಬಗ್ಗೆ ಯಾವ ರೀತಿ ಖುಷಿಯಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಭಿಷೇಕ್ ಅಂಬರೀಶ್ ಲವ್ ಮಾಡಿ ಮದುವೆಯಾದವನಿಗೆ ಇನ್ನೇನಿರುತ್ತೆ, ತುಂಬಾ ಖುಷಿಯಲ್ಲಿರ್ತಾನೆ. ಲವ್ ಮಾಡಿ ಮದುವೆಯಾದ ಪ್ರತಿಯೊಬ್ಬ ಲವರ್ಗೂ ಸಹ ಇದೇ ರೀತಿ ಸಂತಸವಾಗುತ್ತಿರುತ್ತದೆ ಎಂದರು.
ಇನ್ನೂ ಮುಂದುವರಿದು ಮಾತನಾಡಿದ ಅಭಿಷೇಕ್ ಅಂಬರೀಶ್ ಆರತಕ್ಷತೆ ಹಾಗೂ ಮದುವೆ ಎಷ್ಟರ ಮಟ್ಟಕ್ಕೆ ನಡೆಯಿತು ಎಂಬ ಪ್ರಶ್ನೆಗೆ ಉತ್ತರಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿ ತಮ್ಮ ಬಳಿ ರಿಷಬ್ ಶೆಟ್ಟಿ ಹೇಳಿದ ಮಾತನ್ನು ನೆನಪಿಸಿಕೊಂಡರು.
ಅಂಬರೀಶಣ್ಣನ ಮಗನ ಮದುವೆ ಎಂದಮೇಲೆ ಸ್ಟೇಜ್ ಮುರಿಯಲೇಬೇಕು ಎಂದು ಹೇಳಿದರು, ಅದೇ ರೀತಿ ಸ್ಟೇಜ್ ಕೂಡ ಮುರಿದಿದೆ, ಅಷ್ಟು ಅದ್ದೂರಿಯಾಗಿ ಕಾರ್ಯಕ್ರಮ ನಡೆದಿದೆ ಎಂದು ಖುಷಿಯಿಂದ ಹೇಳಿಕೊಂಡರು.
ಬಂದವರೆಲ್ಲಾ ಅಂಬರೀಶ್ ಅವರನ್ನು ನೆನೆದರು, ಅಂಬರೀಶ್ ಅವರಿಗೋಸ್ಕರ ಈ ಕಾರ್ಯಕ್ರಮಕ್ಕೆ ಬಂದಿದ್ದೇವೆ ಎಂದು ಹೇಳಿದರು ಎಂದು ಅಭಿಷೇಕ್ ಅಂಬರೀಶ್ ಅವರು ತಿಳಿಸಿದರು. ಅವರ ಎಲ್ಲಾ ಕೆಲಸಗಳನ್ನು ಬಿಟ್ಟು, ಸಮಯ ಮಾಡಿಕೊಂಡು ಬಂದಿದ್ದು ತುಂಬಾ ದೊಡ್ಡದು ಹಾಗೂ ಖುಷಿ ಕೊಟ್ಟಿದೆ ಎಂದು ಸಂತಸ ವ್ಯಕ್ತಪಡಿಸಿದರು.
ದೇಶದ ಹಲವು ಭಾಗಗಳಿಂದ ಅನೇಕರು ಬಂದಿದ್ದಾರೆ ಹಾಗೂ ವಿದೇಶಗಳಿಂದಲೂ ಸಹ ಆಗಮಿಸಿದ್ದಾರೆ. ಅವರೆಲ್ಲರೂ ಅಂಬರೀಶ್ ಮಗನಿಗೆ ವಿಶ್ ಮಾಡಲೆಂದು ಬಂದಿದ್ದಾರೆ ಎಂದು ಅಭಿಷೇಕ್ ಅಂಬರೀಶ್ ಹೇಳಿದರು. ಇನ್ನು ಅಂಬರೀಶ್ ಅವರು ಇದ್ದಿದ್ದರೆ ಎಷ್ಟು ಖುಷಿ ಪಡ್ತಾ ಇದ್ರು ಎಂದು ಪತ್ರಕರ್ತರೋರ್ವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಭಿಷೇಕ್ ಅಂಬರೀಶ್ ಅವರು ಇದ್ದಿದ್ರೆ ಇನ್ನೂ ಒಂದು ಸೌಂಡ್ ಜಾಸ್ತಿ ಆಗಿರುತ್ತಾ ಇತ್ತು, ಇನ್ನೂ ಜೋರಾಗಿರುತ್ತಾ ಇತ್ತು, ನಿಮಗೆಲ್ಲಾ ಒಳ್ಳೆಯ ಮನರಂಜನೆ ಸಿಕ್ಕಿರೋದು ಎಂದು ಹೇಳಿದರು. ಈ ಮೂಲಕ ಅಭಿಷೇಕ್ ಅಂಬರೀಶ್ ತಮ್ಮ ತಂದೆಯನ್ನು ನೆನೆದರು.