ಕ್ರಿಕೆಟ್ನಲ್ಲಿ ಮಿಂಚಿದ ಎಂ.ಎಸ್. ಧೋನಿ (MS Dhoni) ಅವರಿಗೆ ಈಗ ಚಿತ್ರರಂಗದ ಮೇಲೆ ಆಸಕ್ತಿ ಹೆಚ್ಚಾಗಿದೆ. ನಿರ್ಮಾಪಕನಾಗಿ ಅವರು ಆ್ಯಕ್ಟೀವ್ ಆಗಿದ್ದಾರೆ. ತಮ್ಮ ಬ್ಯಾನರ್ ಮೂಲಕ ಅವರು ಅನೇಕರಿಗೆ ಅವಕಾಶ ನೀಡುತ್ತಿದ್ದಾರೆ. ಕ್ಯಾಪ್ಟನ್ ಕೂಲ್ ಅಂತಲೇ ಫೇಮಸ್ ಆದವರು ಎಂ.ಎಸ್ ಧೋನಿ. ಅವರ ನಿರ್ಮಾಣದಲ್ಲಿ ಮೂಡಿಬರುವ ಸಿನಿಮಾಗಳ ಬಗ್ಗೆ ಪ್ರೇಕ್ಷಕರಿಗೆ ನಿರೀಕ್ಷೆ ಸೃಷ್ಟಿ ಆಗಿದೆ. ಪತ್ನಿ ಸಾಕ್ಷಿ (Sakshi Dhoni) ಜೊತೆಗೂಡಿ ಮಹೇಂದ್ರ ಸಿಂಗ್ ಧೋನಿ ಅವರು ‘ಧೋನಿ ಎಂಟರ್ಟೇನ್ಮೆಂಟ್ ಪ್ರೈವೆಟ್ ಲಿಮಿಡೆಟ್’ ಕಂಪನಿ ಶುರು ಮಾಡಿದ್ದರು. ಅವರ ಸಂಸ್ಥೆ ಮೂಲಕ ನಿರ್ಮಾಣ ಆಗುತ್ತಿರುವ ಚೊಚ್ಚಲ ಸಿನಿಮಾ ಹೆಸರು ‘ಲೆಟ್ಸ್ ಗೆಟ್ ಮ್ಯಾರೀಡ್’. ಇದನ್ನು ಶಾರ್ಟ್ ಆಗಿ ‘ಎಲ್ಜಿಎಂ’ (LGM Movie) ಎಂದು ಕರೆಯಲಾಗುತ್ತಿದೆ. ತಮಿಳಿನ ಈ ಸಿನಿಮಾ ಕರ್ನಾಟಕದಲ್ಲಿ ಕೂಡ ರಿಲೀಸ್ ಆಗಲಿದೆ.
‘ಲೆಟ್ಸ್ ಗೆಟ್ ಮ್ಯಾರೀಡ್’ ಚಿತ್ರವು ಟೀಸರ್ ಮೂಲಕ ನಗುವಿನ ಕಚಗುಳಿ ಇಟ್ಟಿತ್ತು. ಕರ್ನಾಟಕದಲ್ಲಿನ ಜನರಿಂದಲೂ ಟೀಸರ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ‘ಲೆಟ್ಸ್ ಗೆಟ್ ಮ್ಯಾರೀಡ್’ ಈ ಚಿತ್ರವನ್ನು ಕರುನಾಡಿನಲ್ಲಿಯೂ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಇತ್ತೀಚೆಗೆ ಡಿಫರೆಂಟ್ ಕಾನ್ಸೆಪ್ಟ್ ಇರುವ ಪರಭಾಷೆ ಚಿತ್ರಗಳಿಗೆ ಕರ್ನಾಟಕದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದ ಉದಾಹರಣೆ ಇದೆ. ಆದ್ದರಿಂದ ‘ಲೆಟ್ಸ್ ಗೆಟ್ ಮ್ಯಾರೀಡ್’ ಸಿನಿಮಾವನ್ನು ಕೂಡ ಕರ್ನಾಟಕದಲ್ಲಿ ಬಿಡುಗಡೆ ಮಾಡಲಾಗುವುದು. ಈ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
ನಿರ್ಮಾಪಕನಾಗಿ ಮೊದಲ ಪ್ರಯತ್ನದಲ್ಲೇ ಧೋನಿ ಅವರು ಫ್ಯಾಮಿಲಿ ಪ್ರೇಕ್ಷಕರನ್ನು ಟಾರ್ಗೆಟ್ ಮಾಡಿದ್ದಾರೆ. ಕೌಟುಂಬಿಕ ಮನರಂಜನಾ ಕಥಾಹಂದರ ಇರುವ ‘ಲೆಟ್ಸ್ ಗೆಟ್ ಮ್ಯಾರೀಡ್’ ಚಿತ್ರವನ್ನು ಅವರು ಪ್ರೇಕ್ಷಕರಿಗೆ ನೀಡುತ್ತಿದ್ದಾರೆ. ಈ ಸಿನಿಮಾಗೆ ರಮೇಶ್ ತಮಿಳ್ಮಣಿ ನಿರ್ದೇಶನ ಮಾಡಿದ್ದಾರೆ. ನಾಯಕನಾಗಿ ಹರೀಶ್ ಕಲ್ಯಾಣ್ ನಟಿಸಿದ್ದಾರೆ. ನಾಯಕಿ ಪಾತ್ರವನ್ನು ಇವಾನಾ ನಿಭಾಯಿಸಿದ್ದಾರೆ. ಪೋಸ್ಟರ್ಗಳು ಕೂಡ ಗಮನ ಸೆಳೆದಿವೆ. ‘ಲೆಟ್ಸ್ ಗೆಟ್ ಮ್ಯಾರೀಡ್’ ಚಿತ್ರಕ್ಕೆ ಈಗಾಗಲೇ ಶೂಟಿಂಗ್ ಮುಗಿದಿದೆ. ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಈ ಸಿನಿಮಾವನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕು ಎಂಬ ಗುರಿ ಇಟ್ಟುಕೊಂಡು ಚಿತ್ರತಂಡ ಕೆಲಸ ಮಾಡುತ್ತಿದೆ.
ರಮೇಶ್ ತಮಿಳ್ಮಣಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡುವುದರ ಜೊತೆಗೆ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ ಎಂಬುದು ವಿಶೇಷ. ಸಿನಿಮಾದ ಟೀಸರ್ ನೋಡಿದವರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು ಚಿತ್ರತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಸದ್ಯದಲ್ಲೇ ಈ ಸಿನಿಮಾದ ಹಾಡುಗಳು ಮತ್ತು ಟ್ರೇಲರ್ ಬಿಡುಗಡೆ ಆಗಲಿದೆ. ಅದಕ್ಕಾಗಿ ಧೋನಿ ಫ್ಯಾನ್ಸ್ ಕಾದಿದ್ದಾರೆ. ಹಿರಿಯ ಕಲಾವಿದೆ ನದಿಯಾ, ಖ್ಯಾತ ನಟ ಯೋಗಿ ಬಾಬು ಹಾಗೂ ಆರ್‌ಜೆ ವಿಜಯ್ ಅವರು ಕೂಡ ‘ಲೆಟ್ಸ್ ಗೆಟ್ ಮ್ಯಾರೀಡ್’ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.